ಪವಿತ್ರಾತ್ಮ -
	ಕ್ರೈಸ್ತ ಧಾರ್ಮಿಕ ಸಿದ್ಧಾಂತದಲ್ಲಿ ಪವಿತ್ರ ತ್ರಿತ್ವದಲ್ಲಿರುವ ಮೂರನೆಯ ವ್ಯಕ್ತಿ. ಪಿತನಾದ ದೇವರು ಸುತನಾದ ದೇವರು. ಪವಿತ್ರಾತ್ಮವಾದ ದೇವರು ಮೂವರು ಒಂದೇ ದೇವರು ಆದರೆ ಸ್ಪಷ್ಟವಾಗಿ ಬೇರೆ ಬೇರೆಯಾಗಿರುವ ಮೂವರು ವ್ಯಕ್ತಿಗಳು. ಇದು ಪರಮ ತ್ರಿತ್ವದ ರಹಸ್ಯ. ಆತ್ಮ ಎಂಬ ಪದ ಹೀಬ್ರುವಿನ ರುಆ್ಹ. ಗ್ರೀಕ್‍ನ ಪೆವ್ಮಾ, ಲ್ಯಾಟಿನ್ನಿನ ಸ್ಪಿರಿತುಸ್, ಇಂಗ್ಲಿಷಿನ ಸ್ಪಿರಿಟ್ ಪದಗಳಿಗೆ ಸಂವಾದಿಯಾಗಿದೆ. ಕ್ಲ್ಯಾಸಿಕಲ್ ಮತ್ತು ಬೈಬಲ್ ಭಾಷೆಗಳಲ್ಲಿ ಈ ಪದಕ್ಕೆ ಒಂದು ಜೀವಿಯ ಮೂಲತತ್ತ್ವಕ್ಕೆ ಸಂಬಂಧಿಸಿದ, ಅದಕ್ಕೆ ಜೀವನವನ್ನೂ ಕ್ರಿಯೆಯನ್ನೂ ಕೊಡುವಂಥ ಆದರೂ ಅರ್ಥೈಸುವುದಕ್ಕೆ ದುಸ್ಸಾಧ್ಯವಾಗಿರುವಂಥ ಅಂಶವೆಂಬ ಅರ್ಥವಿದೆ. ಬೈಬಲಿನಲ್ಲಿ ಬೆಂಕಿ, ನೀರು, ಗಾಳಿ, ಬಿರುಗಾಳಿಗಳು ಆತ್ಮಕ್ಕೆ ಸಂಕೇತಗಳಾಗಿ ಬರುತ್ತವೆ. ಆತ್ಮ ತಾನು ಯಾರನ್ನು ಸೇರಿಸಿಕೊಳ್ಳುತ್ತದೋ ಅವನನ್ನು ಸಂಪೂರ್ಣ ತುಂಬಿ ಉಕ್ಕಿ ಹರಿಯುವಂಥ ಪ್ರಬಲವಾದ ಸಾನ್ನಿಧ್ಯ ಎಂಬ ಅರ್ಥವನ್ನು ಈ ಸಂಕೇತಗಳು ಸೂಚಿಸುತ್ತವೆ. ಬೈಬಲಿನಲ್ಲಿ ಪವಿತ್ರಾತ್ಮನ ಸ್ವಭಾವ ಸ್ವರೂಪಗಳಿಗಿಂತ ಅವನ ಕಾರ್ಯವಿಶೇಷಗಳನ್ನು ಹೆಚ್ಚಾಗಿ ಹೇಳಿದೆ.

	ಹಳೆ ಒಡಂಬಡಿಕೆಯಲ್ಲಿ ಪವಿತ್ರಾತ್ಮನೆಂಬ ಪ್ರಯೋಗವಿಲ್ಲ. ದೇವರ ಆತ್ಮ ಎಂಬ ಪ್ರಯೋಗವಿದೆ. ಎರಡಕ್ಕೂ ಅರ್ಥ ಒಂದೇ : ಚರಿತ್ರೆಯ ಘಟನೆಗಳಲ್ಲಿ, ಭೌತಪ್ರಪಂಚದಲ್ಲಿ, ಮನುಷ್ಯನಲ್ಲಿ, ಸ್ಥೂಲವಾಗಿ ಇಡೀ ಜಗತ್ತಿನಲ್ಲಿ ಕ್ರಿಯಾಶೀಲವಾಗಿರುವ ದೈವೀ ಶಕ್ತಿ ಅಥವಾ ದೇವರು. ದೇವರ ಆತ್ಮ ಚರಿತ್ರೆಯನ್ನು ನಿಯಂತ್ರಿಸುತ್ತದೆ, ದೇವರು ತನಗಾಗಿ ಆರಿಸಿದ ಜನತೆಯ ಹಿತರಕ್ಷಕನಾಗಿರುತ್ತದೆ. ಅವರು ಪಾಲಿಸಬೇಕಾದ ಅಂತರಂಗದ ಬಹಿರಂಗದ ನಿಯಮಗಳನ್ನು ವಿಧಿಸುತ್ತದೆ. ದೇವರ ಆತ್ಮ ಕೆಲವು ಪ್ರತ್ಯೇಕ ಧಾರ್ಮಿಕ ನಾಯಕರಿಗೆ ವಿಶೇಷವಾದ ವರವಾಗಿ ಕೊಡಲ್ಪಡುತ್ತದೆ. ದೇವರ ಆತ್ಮ ದೇವರ ಒಡಂಬಡಿಕೆಯ ಮತ್ತು ಇಸ್ರೇಲ್ ಜನತೆಯ ಮೇಲೆ ಅವನಿಟ್ಟಿರುವ ಪ್ರೀತಿ, ನಿಷ್ಠೆಗಳ ಆಶ್ವಾಸನೆಯೂ ಕುರುಹೂ ಆಗಿದೆ. ಮುಂಬರಲಿರುವ ಮೆಸ್ಸಾಯನನ್ನು ಕುರಿತು ಪ್ರವಾದಿಗಳು ನುಡಿದ ಭವಿಷ್ಯವಾಕ್ಕುಗಳಲ್ಲಿ ದೇವರ ಆತ್ಮ ವಿಶೇಷವಾದ ಸ್ಥಾನವನ್ನು ವಹಿಸುತ್ತದೆ. ಮೆಸ್ಸಾಯ ಉದ್ಘಾಟಿಸಲಿರುವ ಹೊಸ ಯುಗದಲ್ಲಿ ದೇವರ ಆತ್ಮವನ್ನು ಎಲ್ಲರೂ ತಮ್ಮ ಸ್ವಂತ ಸ್ವತ್ತಾಗಿ ಪಡೆಯುವರು ; ಆತ್ಮವನ್ನು ಎಲ್ಲರ ಮೇಲೆ ಧಾರಾಳವಾಗಿ ಹೊಯ್ದು ಹರಿಸುವ ಮನುಷ್ಯ ಕುಲಕ್ಕೆ ಮುಕ್ತಿಯನ್ನು ಒದಗಿಸುವ ಕಾರ್ಯ ಜರುಗುವುದು.

	ಈ ಭವಿಷ್ಯವಾಕ್ಕುಗಳ ಪ್ರಕಾರ ಮುಕ್ತಿಪಡೆದ ಜನತೆಯನ್ನು ಪವಿತ್ರಾತ್ಮ ಉಂಟುಮಾಡಿತು ಎಂಬ ಅಭಿಪ್ರಾಯ ಹೊಸ ಒಡಂಬಡಿಕೆಯಲ್ಲಿದೆ. ದೇವರ ಪುತ್ರ ಪವಿತ್ರಾತ್ಮದ ಶಕ್ತಿಯಿಂದ ಹುಟ್ಟಿದ ; ಜ್ಞಾನಸ್ನಾನದ ಸಂದರ್ಭದಲ್ಲಿ ಪವಿತ್ರಾತ್ಮ ಯೇಸುವಿನ ಮೇಲೆ ಅವತರಿಸಿತು ; ಯೇಸುವಿನ ಎಲ್ಲ ಕ್ರಿಯೆಗಳನ್ನೂ ಪ್ರೇರೇಪಿಸಿತು. ತಾನಿಲ್ಲದಿದ್ದಾಗ ತನ್ನ ಶಿಷ್ಯರೊಡನೆ ಆತ್ಮ ಇರುವುದು ಎಂದು ಯೇಸು ಆಶ್ವಾಸನೆ ನೀಡಿದ್ದ ; ಪ್ರಪಂಚವೆಲ್ಲ ಅರಿಯುವಂತೆ ಅವರು ಯೇಸುವಿನ ಸಾಕ್ಷಿಗಳಾಗಿರಬೇಕಾದುದು ಪವಿತ್ರಾತ್ಮದ ಶಕ್ತಿಯಿಂದಲೇ ಈ ಆಶ್ವಾಸನೆ ಪಂಟೆಕೊಸ್ಟ್ ದಿನ ನೆರವೇರಿತು-ಪವಿತ್ರಾತ್ಮ ಜ್ವಾಲೆಯ ರೂಪದಲ್ಲಿ ಶಿಷ್ಯರ ಮೇಲೆ ಅವತರಿಸಿತು. ಇದಾದ ಬಳಿಕ ಪವಿತ್ರಾತ್ಮ ಧರ್ಮಸಭೆಯ ಆಂತರಿಕ ಪ್ರೇರಣಾಶಕ್ತಿಯೂ ನೇತಾರನೂ ಮಾರ್ಗದರ್ಶಿಯೂ ಆಯಿತು. ಸದಾಕಾಲ ಧರ್ಮಸಭೆಯೊಡನೆಯೇ ಇರುವುದಾಗಿಯೂ ಕಷ್ಟಕಾಲದಲ್ಲಿ ವಿಶ್ವಾಸಿಗಳ ನೆರವಿಗೆ ಬರುವುದಾಗಿಯೂ ಯೇಸು ಆಶ್ವಾಸನೆ ನೀಡಿದೆ.

	ಸಂತ ಪೌಲನ ಬರಹಗಳಲ್ಲಿ ಪವಿತ್ರಾತ್ಮದ ಬಗೆಗೆ ವ್ಯಾಪಕವೂ ಗಹನವೂ ಧರ್ಮ ಸಿದ್ಧಾಂತದ ದೃಷ್ಟಿಯಿಂದ ಪ್ರಮುಖವೂ ಆದ ವಿಚಾರಗಳಿವೆ. ಹೊಸದಾಗಿ ಕ್ರೈಸ್ತ ವಿಶ್ವಾಸವನ್ನು ಅಂಗೀಕರಿಸಿದ ವಿಶ್ವಾಸಿಗಳಲ್ಲಿ ದೇವರಿಂದಲೇ ಬಂದಂಥವು ಎಂದು ಸ್ಪಷ್ಟವಾಗಿ ಗುರುತಿಸಬಹುದಾದ ಅನೇಕ ಸತ್ಪರಿಣಾಮಗಳು ಕಂಡುಬಂದವು. ಇವುಗಳ ಹಿನ್ನಲೆಯಲ್ಲಿ ಪವಿತ್ರಾತ್ಮದ ವಿಶ್ವಾಸಿಗಳಿಗೆ ಅನೇಕ ವರಗಳನ್ನು ಕೊಟ್ಟಿತು. ಇವುಗಳಲ್ಲಿ ಗ್ಲೊಸ್ಸಾಲಿಯ (ತನಗೇ ತಿಳಿಯದ ಯಾವುದೋ ಭಾಷೆಯಲ್ಲಿ ಅದಮ್ಯ ಉತ್ಸಾಹದಿಂದ ಅಸ್ಪಷ್ಟವಾಗಿ ಪಿಸುಗುಟ್ಟುತ್ತ ದೇವರ ಗುಣಮಹಿಮೆಗಳನ್ನು ಹೊಗಳುವುದು) ಒಂದು ಈ ವರಗಳಲ್ಲಿ ಮುಖ್ಯವಾದುದು ದೇವರಿಂದ ಪ್ರೇರಿತವಾದ ಪ್ರವಾದನೆ ದೇವರ ವಾಕ್ಯವನ್ನು ವಿವರಿಸುವುದು. ಈ ವರ ವಿಶ್ವಾಸಿಗಳ ಬಳಗವನ್ನು ಮತ್ತಷ್ಟು ಬಿಗಿಯಾಗಿ ಒಗ್ಗೂಡಿಸಿ ಧರ್ಮಜೀವನದಲ್ಲಿ ಅವರು ಮುನ್ನಡೆಯುವಂತೆ ಮಾಡುತ್ತದೆ. ತಡೆಯಲಸಾಧ್ಯವಾದ ಅಪೂರ್ವ ದೈವೀಶಕ್ತಿಗಳಾಗಿ ಪವಿತ್ರಾತ್ಮದ ವರಗಳು ವಿಶ್ವಾಸಿಗಳು ಜೀವನಾನುಭವವನ್ನು ಪ್ರವೇಶಿಸುತ್ತವೆ. ಹೆಚ್ಚೇಕೆ, ವಿಶ್ವಾಸಿಗಳ ಬಳಗವನ್ನು ಸ್ಥಾಪಿಸುವುದು. ಪವಿತ್ರಾತ್ಮವೇ, ಆ ಬಳಗದ ಜೀವತತ್ತ್ವವೂ ಅದೇ. ಧರ್ಮಸಭೆಯಲ್ಲಿಯೂ ಪ್ರತಿಯೊಬ್ಬ ವಿಶ್ವಾಸಿಯಲ್ಲೂ ಪವಿತ್ರಾತ್ಮ ನೆಲಸುತ್ತದೆ. ಇದು ಶಬ್ದಚಮತ್ಕಾರವಾಗಲಿ, ಅಲಂಕಾರವಾಗಲಿ ಅಲ್ಲ. ಪವಿತ್ರಾತ್ಮ ಧರ್ಮಸಭೆಯಲ್ಲಿ, ವಿಶ್ವಾಸಿಯಲ್ಲಿ ನಿಜವಾಗಿ ವಾಸ್ತವವಾಗಿ ವಾಸಮಾಡುತ್ತದೆ. ವಿಶ್ವಾಸಿಗಳ ಪ್ರತಿಯೊಂದು ಸತ್ಕಾರ್ಯಕ್ಕೂ ಪ್ರೇರಣೆ ಅದೇ. ಮುಖ್ಯವಾಗಿ ಅವರು ದೇವರನ್ನು ಅಬ್ಬಾ, ತಂದೆಯೇ ಎಂದು ಸಂಬೋಧಿಸುವಂತೆ ಮಾಡುತ್ತದೆ. ಪವಿತ್ರಾತ್ಮದ ಆಂತರಿಕ ವಾಸ್ತವ್ಯದಿಂದ ಕ್ರೈಸ್ತ ವಿಶ್ವಾಸಿ ಆಂತರಿಕ ಹಾಗೂ ಬಹಿರಂಗ ಧಾರ್ಮಿಕ ಜೀವನದಲ್ಲಿ ಸರ್ವತೋಮುಖವಾಗಿ ಮುನ್ನಡೆಯುವುದು ಸಾಧ್ಯವಾಗುತ್ತದೆ. ಪ್ರೀತಿ, ಸಂತೋಷ, ನೆಮ್ಮದಿ, ತಾಳ್ಮೆ, ದಯೆ, ಉಪಕಾರ, ನಂಬಿಕೆ, ಸಾಧುತ್ವ, ಶಮೆ, ದಮೆ-ಇವು ಪವಿತ್ರಾತ್ಮ ವಿಶ್ವಾಸಿಗಳಿಗೆ ಕೊಡುವ ಫಲಗಳು, ಪಾಪ, ಸಾವು ಮತ್ತು ಮನುಷ್ಯನಿಗೆ ಬಂಧನ ಸ್ವರೂಪವಾಗಿರುವ ಪೂರ್ವದ ನಿಯಮ ಸಮಷ್ಟಿಗಳಿಂದ ಬಿಡುಗಡೆಯನ್ನು ಪವಿತ್ರಾತ್ಮ ನೀಡುತ್ತದೆ. ಜಗತ್ತು ಕೊನೆಗೊಳ್ಳುವಾಗ ಬರಲಿರುವ ಸಂಪೂರ್ಣ ಸ್ವಾತಂತ್ರ್ಯ ಪರಮಾನಂದಗಳ ಪೂರ್ವಭಾವಿ ಅನುಭವವೂ ಆಶ್ವಾಸನೆಯೂ ಅದೇ ಆಗಿದೆ.

	ಪೌಲ ಆತ್ಮನನ್ನು ದೇವರ ಆತ್ಮ ಎಂದೂ ಕ್ರಿಸ್ತನ ಆತ್ಮ ಎಂದೂ ಕರೆದಿದ್ದಾನೆ. ಎರಡೂ ಪ್ರಯೋಗಗಳು ಒಂದೇ ವ್ಯಕ್ತಿಯನ್ನು ನಿರ್ದೇಶಿಸುತ್ತವೆ. ಲೋಕರಕ್ಷಣೆಯ ಕಾರ್ಯವನ್ನು ಕ್ರಿಸ್ತ ನೆರವೇರಿಸಿದುದು ಪವಿತ್ರಾತ್ಮದಲ್ಲಿ. ಕ್ರಿಸ್ತ ಧರ್ಮಸಭೆಯಲ್ಲಿರುವುದೂ ಪವಿತ್ರಾತ್ಮದಲ್ಲಿ. ಪವಿತ್ರಾತ್ಮದ ವೈಯಕ್ತಿಕ ಸ್ವಭಾವವನ್ನು ಪೌಲ ಸ್ಪಷ್ಟಪಡಿಸುವುದಿಲ್ಲ. ಆದರೂ ಪಿತ ಮತ್ತು ಸುತರನ್ನು ಹೆಸರಿಸಿದ ಕೊಡಲೆ ಪವಿತ್ರಾತ್ಮವನ್ನು ಹೆಸರಿಸುದುದೂ ಆ ಮೇಲೆ ಬರುವ ಅದರ ಕಾರ್ಯಗಳ ಸ್ವರೂಪವರ್ಣನೆಯೂ ಅದರ ಸ್ವಭಾವದ ಬಗೆಗೆ ಸ್ಪಷ್ಟ ಸೂಚನೆಗಳನ್ನು ನೀಡುತ್ತವೆ.

	ಬೈಬಲಿನಲ್ಲಿ ನಿರೂಪಿವಾದ ಪವಿತ್ರಾತ್ಮದ ಈ ಕಲ್ಪನೆ ಕಾಲಕಳೆದಂತೆ ಧರ್ಮಸಭೆಯಲ್ಲಿ ಹೆಚ್ಚು ನಿರ್ದಿಷ್ಟತೆಯನ್ನು ಪಡೆಯಿತು. ಕ್ರೈಸ್ತಧರ್ಮದ ಮೊದಲ ಶತಮಾನಗಳಲ್ಲಿ ಪವಿತ್ರಾತ್ಮವನ್ನು ಅದರ ಕ್ರಿಯಾಕ್ಷೇತ್ರದ ಪರಿಧಿಯಲ್ಲಿಯೇ ಅರ್ಥೈಸುತ್ತಿದ್ದರು. ನಾಲ್ಕನೆಯ ಶತಮಾನದಲ್ಲಿ ಪವಿತ್ರಾತ್ಮ ನಿಜವಾಗಿಯೂ ದೇವರು ಎಂದು ಧರ್ಮಸಭೆ ಅಧಿಕೃತವಾಗಿ ಸ್ಪಷ್ಟನೆ ನೀಡಿತು. ತರುವಾಯದ ಸೈದ್ಧಾಂತಿಕ ಬೆಳವಣಿಗೆಯಲ್ಲಿ ಇಂದಿಗೂ ಉಳಿದಿರುವ ಮತ್ತು ಫಿಲಿಯೋಕ್ವೆ (ಸುತನಿಂದಲೂ) ಎಂದು ಪ್ರಸಿದ್ಧವಾದ ಒಂದು ಸಮಸ್ಯೆ ಮಾತ್ರ ಮುಖ್ಯವಾದುದು ಪಿತ ಮತ್ತು ಸುತ ಇವರಿಬ್ಬರಿಂದಲೂ ಪವಿತ್ರಾತ್ಮ ಮುಂದುವರಿಯುತ್ತದೆ ಎಂದು ಲ್ಯಾಟಿನ್ ಪಂಥದವರೂ ಪಿತನೊಬ್ಬನಿಂದಲೇ ಮುಂದುವರಿಯುತ್ತದೆ ಎಂದು ಗ್ರೀಕ್ ಪಂಥದವರೂ ಭಿನ್ನಾಭಿಪ್ರಾಯ ತಳೆದರು. ಇದು ಒಂದೇ ವಿಷಯವನ್ನು ಬೇರೆ ಬೇರೆ ದೃಷ್ಟಿಗಳಿಂದ ನೋಡಿದುದರ ಪರಿಣಾಮವಲ್ಲದ ಮೂಲಭೂತ ತತ್ತ್ವಗಳ ಅಭಿಪ್ರಾಯ ಭೇದವಲ್ಲ. ಸಂತ ಅಗಸ್ಟಿನ್ ಹೇಳಿರುವಂತೆ ಪವಿತ್ರಾತ್ಮನೆಂದರೆ ಪಿತ ಮತ್ತು ಸುತನ ನಡುವೆ ಇರುವ ಪ್ರೀತಿ ಎಂಬ ವಿವರಣೆ ಇಂದಿಗೂ ಮಾನ್ಯತೆ ಪಡೆದಿದೆ. ವಿಶ್ವಾಸಿಗಳಲ್ಲಿ ಪವಿತ್ರಾತ್ಮ ವಾಸ್ತವವಾಗಿ ನೆಲಸುವುದು ಅದೊಂದಕ್ಕೆ ಮಾತ್ರ ವಿಶಿಷ್ಟವಾದುದ್ದು. ಪಿತ, ಸುತ, ಆತ್ಮ ಮೂವರೂ ನೆಲಸುತ್ತಾರೆಯಾದರೂ ಇದನ್ನು ಮತ್ತು ವಿಶ್ವಾಸಿಗಳನ್ನು ಪವಿತ್ರೀಕರಿಸುವ ಕಾರ್ಯವನ್ನು ವಿಶೇಷವಾಗಿ ಪವಿತ್ರಾತ್ಮನಿಗೆ ಆಪಾದಿಸುವುದು ಶಾಸ್ತ್ರಸಮ್ಮತವಾಗಿದೆ. 

	ಪವಿತ್ರಾತ್ಮದ ಆಶ್ರಯದಲ್ಲಿ ಅದರ ಗೌರವಾರ್ಥ, ಸಂನ್ಯಾಸಿ, ಸಂನ್ಯಾಸಿನಿಯರ ಮಠಗಳು ಸ್ಥಾಪಿತವಾಗಿ, ಧಾರ್ಮಿಕ ಸಾಮಾಜಿಕ ಆದರ್ಶಗಳಿಗೆ ಜೀವನವನ್ನು ಮುಡಿಪಾಗಿಡುವ ಸತ್ಸಂಪ್ರದಾಯ ಪವಿತ್ರಾತ್ಮ ಕ್ರೈಸ್ತ ಭಕ್ತಿಜೀವನದಲ್ಲಿ ಪಡೆದಿರುವ ಸ್ಥಾನದ ಸೂಚಕವಾಗಿದೆ. ವಿಶ್ವಾಸಿಗಳನ್ನು ಪವಿತ್ರೀಕರಿಸುವಂಥ ಪವಿತ್ರಾತ್ಮದ ವಿಶಿಷ್ಟ ಸ್ವಭಾವವನ್ನು ಕೆಲವೊಮ್ಮೆ ಕ್ರೈಸ್ತ ವಿಶ್ವಾಸಿಗಳು ಮರೆತದ್ದುಂಟು. ಆದರೆ ಇತ್ತೀಚಿಗೆ ಪೆಂಡೆಕೋಸ್ಟಲ್ಸ್ ಮೊದಲಾದ ಹೊಸ ಭಕ್ತಿ ಸಂಪ್ರದಾಯದಲ್ಲಿ ಪವಿತ್ರಾತ್ಮದ ಬಗೆಗೆ ಭಕ್ತಿಪೂರ್ವಕ ನಂಬಿಕೆ ಮತ್ತು ವಿಶ್ವಾಸ ಮತ್ತೆ ಸ್ಥಾಪಿತವಾಗಿದೆ. ಕ್ರೈಸ್ತ ಧರ್ಮದ ಹೊಸತರದಲ್ಲಿ ವಿಶ್ವಾಸಿಗಳ ಬಳಗಕ್ಕೆ ತಾನು ಕೊಟ್ಟ ವರಗಳನ್ನು ಅದು ಇಂದೂ ಕೊಡುತ್ತಿದೆ ಎಂಬ ನಂಬಿಕೆಯನ್ನು ಈ ಸಂಪ್ರದಾಯದವರು ಶ್ರದ್ಧೆಯಿಂದ ಎತ್ತಿ ಹಿಡಿಯುತ್ತಾರೆ. ಮಾತ್ರವಲ್ಲದೆ ಗ್ಲೊಸ್ಸಾಲಿಯ, ಪ್ರವಾದನೆ, ದೈಹಿಕ ಮಾನಸಿಕ ವ್ಯಾಧಿಗಳನ್ನು ಗುಣಪಡಿಸುವುದು ಮೊದಲಾದ ಪವಿತ್ರಾತ್ಮದ ವರಗಳನ್ನು ಈ ಸಂಪ್ರದಾಯದವರು ಪಡೆಯುತ್ತಾರೆ ಮತ್ತು ಅನುಭವಿಸುತ್ತಾರೆ. ಪವಿತ್ರಾತ್ಮ ಧರ್ಮಸಭೆಯಲ್ಲಿ ಸದಾಕಾಲ ಜೀವಶಕ್ತಿಯಾಗಿರುತ್ತದೆ ಎಂಬುದಕ್ಕೆ ಆಧುನಿಕ ಕಾಲದ ನಿದರ್ಶನವಿದು.
(ಇ.ಎನ್.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ